Slider

ನಿಮ್ಮ ಎಲ್ಲಾ ಆಲೋಚನೆಗಳನ್ನು ನಂಬಬೇಡಿ

ಪೀಠಿಕೆ

ಬೆಂಗಳೂರಿನ ಎಂಜಿ ರೋಡಿನ ವೈಭವೋಪೇತ ಕಾಫಿ ಶಾಪ್. ಸಂಜೆಯ ಸಮಯದ ಅಲಂಕಾರಿಕ ಬೆಳಕು. ಹಿನ್ನೆಲೆಯಲ್ಲಿ ಹಿತಕರ ಸಂಗೀತ, ಮೂಗಿಗೆ ಸುವಾಸಿತ ಹುರಿದ ಕಾಫಿ ಬೀಜಗಳ ಘಮಲು! ಆಹಾ!!

ಅಲ್ಲಿ ಒಳಗೆ ಒಂದಿಪ್ಪತ್ತು ನೀಟಾಗಿ ಇಸ್ತ್ರಿ ಮಾಡಿದ ಬಟ್ಟೆ ಧರಿಸಿದ ಜನ ಗಿರಾಕಿಗಳು  ಕುಳಿತಿರಬಹುದು.  ಯಾರಿಗೂ ಹಣಕ್ಕೆ ಕೊರತೆ ಇಲ್ಲ. ಎಲ್ಲ ದುಬಾರಿ ವಾಹನದಲ್ಲಿ ಬಂದವರೇ!

ಎಲ್ಲರ ಮುಂದೆ ಥರಾವರಿ ಪೇಯಗಳು ಇವೆ. ನಿಧಾನವಾಗಿ ಹೀರಿಕೊಂಡು ಮಾತಾಡುತ್ತಾ ಕುಳಿತಿದ್ದಾರೆ.

ಆದರೆ ಪ್ರತಿ ಒಬ್ಬರ ಮನಸ್ಸಲ್ಲಿ ಒಳಗೆ ಇಣುಕಿ ಸೂಕ್ಷ್ಮವಾಗಿ ನೋಡಿದರೆ ವಿಭಿನ್ನ ಭಾವನೆ ಇದೆ.

ಕೆಲವರು ಖುಷಿಯಿಂದ ಇದ್ದರೆ ಇನ್ನು ಕೆಲವರ ಮನಸ್ಸಿನಲ್ಲಿ ಅದೇನೋ ಚಿಂತೆ. ಆ ಸುಂದರ ಪರಿಸರ ಅನುಭವಿಸುತ್ತಾ ಹಲವರು ಕುಣಿಯುತ್ತಿದ್ದರೆ, ಇನ್ನು ಕೆಲವರ ಮನದಲ್ಲಿ ಅದೆಂತದೋ ಅಲ್ಲೋಲ ಕಲ್ಲೋಲ.  ಇನ್ನು ಕೆಲವರಿಗೆ ಜೀವನದಲ್ಲಿ ಜಿಗುಪ್ಸೆ ಬಂದ ಹಾಗಿದೆ.

ಏಕೆ ಹೀಗೆ? ಎಲ್ಲಾ ಇರುವುದು ಒಂದೇ ಆಹ್ಲಾದಕರ ವಾತಾವರಣದಲ್ಲಿ. ಆದರೆ ಅಲ್ಲಿರುವ ಎಲ್ಲರಲ್ಲೂ ಒಂದೇ ರೀತಿಯ ಖುಷಿಯ ಭಾವನೆ, ಅನುಭವ ಏಕಿಲ್ಲ?

ನಾವು ಖುಷಿ, ಸಂತೋಷ, ಆನಂದ ಎಲ್ಲಾ ಹೊರಗಿನ ದುಬಾರಿ ವಸ್ತುಗಳಲ್ಲಿ ಇವೆ ಎಂದು ಭ್ರಮಿಸಿದ್ದೇವೆ. ವಾಸ್ತವದಲ್ಲಿ ಸಂತೃಪ್ತಿ ಎಂಬುದು ನಮ್ಮ ಆಲೋಚನೆಯಲ್ಲಿಯೇ ಇದೆ.

ಸಾದಾರಣ ಮನೆಯಲ್ಲಿರುವ ಮನುಷ್ಯ ಕೋಟಿ ರೂಪಾಯಿ ಬಂಗಲೆಯಲ್ಲಿ ಇರುವ ಮನುಷ್ಯಗಿಂತ  ಜಾಸ್ತಿ ಖುಷಿಯಿಂದ ಇರಬಹುದು. 

ಐಫೋನ್ ಅಥವಾ ಹೈಎಂಡ್ ಅಂಡ್ರಾಯಿಡ್ ಫೋನ್ ಕೈಲಿ ಹಿಡಿದು ಸ್ಕ್ರೊಲ್ ಮಾಡುತ್ತಿರುವರಿಗಿಂತ ಬರಿ ಕಾಲ್ ಸೌಲಭ್ಯ ಇರುವ ಫೀಚರ್ ಫೋನ್ ಇರುವವನೇ ಸುಖಿ ಆಗಿಬಹುದು. ಇವು ಕೇವಲ ಮೈಂಡ್ ಸೆಟ್ ಮಾತ್ರ.

ಕೇವಲ ಹೊರಗಿನ ಯಾವುದೇ ಲಕ್ಷುರಿ ವಸ್ತು ಆ ಸುಖದ ಭಾವನೆ ನೀಡದು. ಕೊಟ್ಟರೂ ಅದು ಕ್ಷಣಿಕ ಮಾತ್ರ! ಹಾಗಿದ್ದರೆ ನಾವು ಸಂತೋಷವನ್ನು ಜೀವನದಲ್ಲಿ ಪಡೆಯುವ ಬಗೆ ಹೇಗೆ?

ಬನ್ನಿ ಇದರ ಬಗ್ಗೆ ಬೆಳಕು ಚೆಲ್ಲುವ ನಾನು ಓದಿದ ಒಂದು ಪುಸ್ತಕದ ಸಾರಾಂಶ ಈ ಲೇಖನದಲ್ಲಿ ನೀಡಲಿದ್ದೇನೆ. 

ಹಲವು ತಿಂಗಳುಗಳ ಹಿಂದೆ ನಾನು ನನ್ನ ಮೊಬೈಲ್ ಅಲ್ಲಿ ಅಮೇಜಾನ್ ಆಪ್ ವಿಹರಿಸುತ್ತಾ ಅಲ್ಲಿನ ಪುಸ್ತಕಗಳ ಪಟ್ಟಿ ನೋಡ್ತಾ ಇದ್ದೆ.

ಸ್ಕ್ರಾಲ್ ಮಾಡ್ತಾ ಇದ್ದಾಗ ಥಟ್ಟನೇ ಅಲ್ಲಿದ್ದ ಒಂದು ಇಂಗ್ಲಿಷ್ ಪುಸ್ತಕ ನನ್ನ ಗಮನ ಸೆಳೆಯಿತು.

ಅದುವೇ "ನಿಮ್ಮ ಎಲ್ಲಾ ಆಲೋಚನೆಗಳನ್ನು ನಂಬಬೇಡಿ"!!

ಶುಭ್ರ ಬಿಳಿ ಬಣ್ಣದ ಹೊದಿಕೆ ಇರುವ ಪುಸ್ತಕದ ಹೆಸರು ಒಂತರಾ ಕುತೂಹಲ ನನಗೆ ಮೂಡಿಸಿತು

ಯಾಕೆ ನಮ್ಮ ಎಲ್ಲಾ ಆಲೋಚನೆ ನಂಬಬಾರದು? ಅನ್ನುವ ಪ್ರಶ್ನೆ ನನಗೆ ಮೂಡಿತು. 

ತಿಳಿದು ಕೊಳ್ಳದೆ ಇದ್ದರೆ ವಿಕ್ರಮ ಬೇತಾಳ ಕಥೆಯಲ್ಲಿ ಬರುವ ಬೇತಾಳ ಹೇಳುವ ಹಾಗೆ ನನ್ನ ತಲೆ ಸಹಸ್ರ ಹೋಳಾಗಿ ಬಿಟ್ಟೀತು ಅನ್ನಿಸ ತೊಡಗಿತು.

ತತಕ್ಷಣ ಆ ಪುಸ್ತಕ ಖರೀದಿ ಮಾಡಿದೆ.

ಎರಡು ದಿನಗಳಲ್ಲಿ ಆ ಪುಸ್ತಕ ನನ್ನ ಕೈಯಲ್ಲಿ ಇತ್ತು. ಓದಲು  ಶುರು ಮಾಡಿದೆ. ನಿಧಾನವಾಗಿ ಆ ಪುಸ್ತಕದ ವಿಷಯ ನನ್ನ ಆವರಿಸಿ ಕೊಂಡಿತು.

ಈ ಪುಸ್ತಕದಲ್ಲಿ ಏನಿದೆ?

ಈ ಪುಸ್ತಕ ನಮ್ಮ ಆಲೋಚನೆಗಳ ಬಗ್ಗೆ ಹಲವು ಚರ್ಚೆ ಮಾಡುತ್ತದೆ. 

ನಮ್ಮ ಮಾನಸಿಕ ಒದ್ದಾಟಕ್ಕೆ ಕಾರಣ ಏನು? ನಾವು ಆಲೋಚನೆ ಯಾಕೆ ಮಾಡ್ತೇವೆ? ಚಿಂತನೆ ಮತ್ತು ಚಿಂತೆಗೆ ಏನು ವ್ಯತ್ಯಾಸ? ಆಲೋಚನೆ ನಿಲ್ಲಿಸಲು ಏನು ಮಾಡಬೇಕು? ಆಲೋಚನೆ ಇಲ್ಲದೇ ಬದುಕೋದು ಹೇಗೆ? ವಿಚಾರ ಮಾಡುವುದು ಬಿಟ್ಟರೆ ನಮ್ಮ ಗುರಿ, ಕನಸುಗಳ ಕಥೆ ಏನು? 

ಯಾವುದೇ ಅಪೇಕ್ಷೆ ಇಲ್ಲದೆ ಪ್ರೀತಿ ಹಾಗೂ ಕೆಲಸ ಮಾಡುವದು. ಜೀವನದಲ್ಲಿ ಒಳ್ಳೆಯದು, ಕೆಟ್ಟದ್ದು ಯಾವುದು? ನಮ್ಮ ಅಂತ‌: ಪ್ರಜ್ಞೆ ಅನುಸರಿಸುವುದು ಹೇಗೆ? ನಮ್ಮ ಮನಸ್ಸನ್ನು ಉತ್ತಮ ವಿಚಾರಕ್ಕೆ ಜಾಗ ಮಾಡಿ ಕೊಳ್ಳುವುದು ಹೇಗೆ? ವಿಚಾರ ಮಾಡುವುದು ನಿಲ್ಲಿಸಿದಾಗ ಬರುವ ಸಮಸ್ಯೆ ಯಾವುದು? 

ಹೀಗೆ ವಿವಿಧ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಈ ಪುಸ್ತಕ ಮಾಡುತ್ತದೆ.

ಬರಿ ೧೬೭ ಪುಟದ ಈ ಪುಸ್ತಕದ ೧೭ ಪಾಠಗಳು ಪುಟ್ಟದಾಗಿದ್ದು ಸರಳವಾಗಿ ಓದಿಸಿಕೊಂಡು ಹೋಗುತ್ತದೆ.

ಈ ಪುಸ್ತಕದ ಸಾರಾಂಶ ಮುಂದೆ ಇದೆ. ಕೊನೆ ತನಕ ಓದಿ.

ಚಿಂತೆ ನಮ್ಮ ದೊಡ್ಡ ಶತ್ರು. ನಮ್ಮ ದೇಹದ ಮೇಲೆ ಆದ ಗಾಯ ಬೇಗ ಗುಣ ಆದೀತು. ಆದರೆ ಮನಸ್ಸಿಗೆ ಆದ ಆಘಾತ? 

ಅದು ಕಡಿಮೆ ಆಗುವದು ಅಷ್ಟು ಸುಲಭ ಅಲ್ಲ. 

ಅದಕ್ಕಾಗೇ ನಮ್ಮ ಹಿರೀಕರು (ಪೂರ್ವಜರು)  ಇದಕ್ಕೆ ಪರಿಹಾರವಾಗಿ ಧ್ಯಾನ, ಯೋಗ, ಆಧ್ಯಾತ್ಮ ಎಲ್ಲಾ ಇಟ್ಟಿದ್ದಾರೆ. ಅಲ್ವಾ?

ಈ ಚಿಂತೆಗೆ ಪರಿಹಾರ ಏನು ಎಂಬುದನ್ನು ಈ ಪುಸ್ತಕ ಚರ್ಚಿಸಿ ಹಲವು ಪರಿಹಾರ ಹಾಗೂ ಅರಿವನ್ನು ಮೂಡಿಸುವ ಪ್ರಯತ್ನ ಈ ಇಂಗ್ಲೀಷ್ ಪುಸ್ತಕ ಮಾಡುತ್ತದೆ.

ಪುಸ್ತಕ ಪರಿಚಯ

"ನಿಮ್ಮ ಎಲ್ಲಾ ಆಲೋಚನೆಗಳನ್ನು ನಂಬಬೇಡಿ" ಇದು ಜೋಸೆಫ್ ನಗುವೆನ್ ಅವರ ಅಂತರಾಷ್ಟ್ರೀಯ ಬೆಸ್ಟ್ ಸೆಲ್ಲರ್ ಇಂಗ್ಲೀಷ್ ಪುಸ್ತಕ.

ಈ ಪುಸ್ತಕ ನಮ್ಮ ಮನಸ್ಸಿನ ಒಳನೋಟಕ್ಕೆ ಕನ್ನಡಿ ಹಿಡಿದು ಅರಿವನ್ನು ಉಂಟು ಮಾಡುವ ಪ್ರಯತ್ನ ಮಾಡುತ್ತದೆ. ಜೋಸೆಫ  ಅವರು ಆಲೋಚನೆಗಳ ಬಗ್ಗೆ ವಿವರಿಸುತ್ತಾರೆ. ಹೇಗೆ ಆಲೋಚನೆಗಳನ್ನು ಕಂಟ್ರೋಲ್ ಮಾಡಿ ಸಂತೋಷವನ್ನು ಜೀವನದಲ್ಲಿ ತರಬಹುದು ಎಂಬ ಬಗ್ಗೆ ಚರ್ಚೆ ನಡೆಸುತ್ತಾರೆ.

ಕೆಲವು ಝೆನ್ ಕಥೆ ಕೂಡ ಬಳಸಿ ಅರ್ಥ ಆಗೋ ಹಾಗೆ ಬರೆದಿದ್ದಾರೆ. ಬನ್ನಿ ಈ ಪುಸ್ತಕದ ಸಾರಾಂಶ ಇಲ್ಲಿ ಓದೋಣ. ನೆನಪಿಡಿ ಇದು ಈ ಪುಸ್ತಕದ ಕೇವಲ ಭಾವಾರ್ಥದ ಸಾರವೇ ಹೊರತು ಅನುವಾದ ಅಲ್ಲ!

ಈ ಪುಸ್ತಕ ಬೇಕಿದ್ದರೆ ಇಲ್ಲಿ ಖರೀದಿಸಬಹುದು. 

ನಿಮ್ಮ ಜೀವನದ ಒದ್ದಾಟ

ನಿಮಗೆ ದಿನಂಪ್ರತಿ ಒಂದಲ್ಲ ಒಂದು ಕಿರಿಕಿರಿ.ನೀವು ಹೇಗೆ ಯೋಚಿಸಿದ್ದೀರೋ ಹಾಗೆ ಆಗೋದೇ ಇಲ್ಲವಾ? ನಿಮ್ಮ ಮಾತು ಯಾರೂ ಕೇಳುವುದಿಲ್ಲ ಅನ್ನೋ ಭಾವನೆ ಬರ್ತಾ ಇದೆಯಾ?

ಇದೇ ಕಾರಣಕ್ಕೆ ನಿಮಗೆ ಸಿಟ್ಟು, ಅಸಹನೆ, ಅಳು, ದುಃಖ, ಆತಂಕ ಎಲ್ಲ ನಮ್ಮ ಮೆದುಳಿನ ಒಳಗೆ ದಿನ ನಿತ್ಯದ ಅತಿಥಿಗಳು ಆಗಿದ್ದಾರಾ? ನಿಮ್ಮ ಜೀವನ ತುಂಬಾ ಒದ್ದಾಟ ಅನ್ನಿಸ್ಸುತ್ತಾ ಇದೆಯಾ? 

ಇಲ್ಲಿ ಒದ್ದಾಟ ಎಂದರೆ ಕೊರಗು, ಚಿಂತೆ, ವ್ಯಥೆ, ಕಳವಳ, ಮರುಗು. ನಾಮ ಹಲವು ನೋವು ಒಂದೇ!

ಹೀಗೆ ಒಂದು ರೀತಿಯ ಮಾನಸಿಕ ಹಾಗೂ ಭಾವನಾತ್ಮಕ ಒದ್ದಾಟ ಎನ್ನಬಹುದು. 

ಯಾವುದೇ ಮನುಷ್ಯ ಈ ಚಿಂತೆ ಅನ್ನೋ ಪಾಶದಲ್ಲಿ ಸಿಲುಕಿದರೆ ಅದರಿಂದ ತಪ್ಪಿಸಿಕೊಳ್ಳಲು ಹರ ಸಾಹಸ ಬೇಕು. 

ಈ ಚಿಂತೆ ಮನಸ್ಸಲ್ಲಿ ಇರುವಾಗ ಮುಂದೆ ಭಾರೀ ಭೂರಿ ಭೋಜನ ಇದ್ದರೂ ಬೇಡ! ತಲೆ ಭಾರ. ಈ ಕಿರಿಕಿರಿಯಿಂದ ಹೇಗೆ ಹೊರಗೆ ಬರಬೇಕು ಅನ್ನೋದೇ ತಿಳಿಯೋದಿಲ್ಲ.

ಈ ಮಾನಸಿಕ ಒದ್ದಾಟಕ್ಕೆ ಮುಖ್ಯ ಕಾರಣ ಏನು? ನಮ್ಮ ಗ್ರಹಚಾರವಾ? ಅಥವಾ ನಾವೇ ಕೈಯಾರೆ ಮಾಡಿ ಕೊಂಡಿರುವದಾ? 

ಈ ಸಮಸ್ಯೆಗೆ ಪರಿಹಾರ ಏನು?

ಬನ್ನಿ ತಿಳಿಯೋಣ. ಈ ಪುಸ್ತಕದ ಸಾರ ಕೊನೆಯವರೆಗೆ ತಪ್ಪದೇ ಓದಿ.

ಬುದ್ದನ ಎರಡು ಬಾಣದ ಕಥೆ

ಮಾನಸಿಕ ನೋವಿನ ಅಂದರೆ ಚಿಂತೆ, ಕೊರಗುವದರ ಬಗ್ಗೆ ವಿವರಿಸುತ್ತಾ ಗೌತಮ ಬುದ್ದ ಹೀಗೆ ಹೇಳುತ್ತಾರೆ.

ಪ್ರತಿ ಬಾರಿ ಒಂದು ಕೆಟ್ಟ ಘಟನೆ ಅರ್ಥಾತ್ ದುರ್ಘಟನೆ ನಮ್ಮ ಜೀವನದಲ್ಲಿ ನಡೆದಾಗ ಎರಡು ಬಾಣಗಳು ನಮ್ಮ ಕಡೆ ಸುಂಯ್… ಎಂದು ಹಾರಿ ಬರುತ್ತವೆ. 

ಅದು ಆಪ್ತರ ಅಗಲಿಕೆ ಇರಬಹುದು, ಇರುವ ಕೆಲಸ ಹಠಾತ್ ಆಗಿ ಕಳೆದು ಕೊಳ್ಳುವದು, ಎಷ್ಟು ವರ್ಷ ಆದರೂ ಸಿಗದ ಪ್ರೊಮೋಶನ್, ಅಪಘಾತ, ವಿಫಲತೆ, ಪರೀಕ್ಷೆಯಲ್ಲಿ ಫೇಲ್ ಆಗುವುದು. ಹೀಗೆ ಹಲವು.

ಮೊದಲ ಬಾಣ ಭೌತಿಕ ಆಗಿದ್ದು ನಮಗೆ ಚುಚ್ಚಿ ನೋವಾಗುತ್ತೆ. ಈ ಬಾಣ ನಿಲ್ಲಿಸಲು ನಮ್ಮ ಹತ್ತಿರ ಆಗಲ್ಲ. ಅನುಭವಿಸಲೇ ಬೇಕು. ಆ ಘಟನೆ ಆಗಿ ಹೋಗಿದೆ .ಇದು ನಮ್ಮ ಹಣೆಬರೆಹ.

ಇನ್ನು ಎರಡನೆಯ ಬಾಣ ಭಾವನಾತ್ಮಕ ಅದರಿಂದ ಆಗುವ ನೋವು ಅಪಾರ ಅಸಹನೀಯ. ಇದರಿಂದ ಕೋಪ, ಅಳು, ಹತಾಶೆ, ನಿರಾಸೆ ಮೊದಲಾದ ಭಾವನೆ ಆಗುತ್ತೆ.

ಈ ಭಾವನಾತ್ಮಕ ಬಾಣದ ಮೂಲ ಏನು ಗೊತ್ತಾ? ನಮ್ಮ ಮನಸ್ಸೇ!!

ಮೊದಲ ಭೌತಿಕ ಬಾಣಕ್ಕೆ ನಮ್ಮದೇ ಆದ ಮನಸ್ಸಿನ ಉತ್ತರ ಈ ಎರಡನೇ ಬಾಣ. ಅಂದರೆ ಭಾವನಾತ್ಮಕ ಪ್ರತಿಕ್ರಿಯೆ ಆಗಿದೆ. ಇದನ್ನು ತಡೆಯುವದು ನಮ್ಮ ಕೈಲೇ ಇದೆ. ಇದನ್ನು ನಾವು ಮನಸ್ಸು ಮಾಡಿದರೆ ತಡೆಯಬಹುದು. ಹೇಗೆ ಮುಂದೆ ನೋಡೋಣ.

ಪ್ರತಿ ಒಬ್ಬರ ಪ್ರಪಂಚ ಬೇರೆ ಬೇರೆ

ನಾವು ಯಾವಾಗಲೂ ಒಂದು ಆಲೋಚನಾ ಪ್ರಪಂಚದಲ್ಲಿ ಇರುತ್ತೇವೆ. ಅದು ನಿಜವಾದದ್ದಲ್ಲ! 

ನಿಮ್ಮ ಗ್ರಹಿಕೆ ಬೇರೆ. ನನ್ನ ಗ್ರಹಿಕೆ ಬೇರೆ. 

ನಿಮ್ಮ ಅಕ್ಕ ಪಕ್ಕದಲ್ಲಿ ಇರುವ ಜನರ ಗ್ರಹಿಕೆ ಕೂಡಾ ಬೇರೆ ಬೇರೆ!

ನಾವು ಪ್ರತಿ ಒಬ್ಬರು ನಮ್ಮದೇ ಆದ ಈ ಪ್ರಪಂಚದ ಗ್ರಹಿಕೆಯ ಆಧಾರದ ಮೇಲೆಯೇ ಜೀವನ ಕಳೆದುಬಿಡುತ್ತೇವೆ. ಅದೇ ನಿಜ ಪ್ರಪಂಚ ಎಂದು ನಂಬಿರುತ್ತೇವೆ!!

ಯಾವಾಗ ಬೇರೆಯರೂ ನಮ್ಮ ಹಾಗೆ ಯೋಚಿಸಬೇಕು ಅಂದು ಕೊಳ್ಳುತ್ತೇವೆಯೋ ಅಂದೇ ನಮ್ಮ ಚಿಂತೆ ಆರಂಭ. ನಾವೆಲ್ಲಾ ಬೇರೆ ಬೇರೆ. ಎಲ್ಲರೂ ಒಂದೇ ರೀತಿ ಇರೋಕೆ ಸಾಧ್ಯಾನೇ ಇಲ್ಲ.

ಯಾಕೆಂದರೆ ನಾವು ಹುಟ್ಟಿ ಬೆಳೆದಿರುವ ಪರಿಸರ, ಶಿಕ್ಷಣ, ಹಳೆಯ ಅನುಭವ, ಆರ್ಥಿಕ ಸ್ಥಿತಿ ಹೀಗೆ ಹಲವು ನಮ್ಮ ಆಲೋಚನಾ ವಿಧಾನವನ್ನು ಪ್ರಭಾವ ಬೀರುತ್ತದೆ.

ನೂರಾರು ಕೋಟಿಯ ಒಡೆಯ ಐದು ಲಕ್ಷ ಹಣ ಕಳೆದು ಕೊಂಡರೆ ಆತನಿಗೆ ಏನೂ ಅನ್ನಿಸದಿರಬಹುದು, ಆದರೆ ಸಾಧಾರಣ ತಿಂಗಳ ಸಂಬಳ ಎಣಿಸುವ ವ್ಯಕ್ತಿಗೆ ಅಥವಾ ನಿವೃತ್ತಿ ಆದ ವ್ಯಕ್ತಿಗೆ ಅದೇ ಸರ್ವಸ್ವ. ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ! 

ಇನ್ನೂ ಒಂದು ಉದಾಹರಣೆಗೆ ಒಬ್ಬನಿಗೆ ರಸಗುಲ್ಲ ಇಷ್ಟ, ಇನ್ನೊಬ್ಬನಿಗೆ ಜಾಮೂನ್! ಮತ್ತೊಬ್ಬನಿಗೆ ಚಾಕಲೇಟ್. ಇನ್ನು ಕೆಲವರಿಗೆ ಸಿಹಿ ತಿಂಡಿ ಕಂಡರೆ ವಾಂತಿ ಬರುವದೊಂದೆ ಬಾಕಿ. 

ಇದು ನಾಲಿಗೆಯ ವಿಚಾರ. 

ಇನ್ನು ಮಧು ಮೇಹ ಉಳ್ಳವರು ಆರೋಗ್ಯದ ಅನಿವಾರ್ಯತೆಯಿಂದ ತಿನ್ನಲ್ಲ. 

ನೀವು ನಿಮಗೆ ಕಾಜು ಬರ್ಫಿ ಇಷ್ಟ ಎಂದು ಎಲ್ಲರಿಗೂ ಸಿಹಿ ಕೊಡಲು ಹೋದಾಗ ಕೆಲವರು ತಿನ್ನಬಹುದು. 

ಹಲವರು ಮೇಲೆ ತಿಳಿಸಿದ ಕಾರಣಕ್ಕೆ ತಿರಸ್ಕರಿಸಬಹುದು.

ಕೆಲವರು ನಿಮಗೆ ಬೇಜಾರಾಗುತ್ತೆ ಅನ್ನೋ ಕಾರಣಕ್ಕೆ ಸ್ವೀಕರಿಸಬಹುದು.

ಆದರೆ ತಪ್ಪಾಗುವದು ಎಲ್ಲಿ ಗೊತ್ತಾ? ನಿಮ್ಮಿಂದ ಸಿಹಿ ತೆಗೆದುಕೊಳ್ಳದ ಕಾರಣ ಕೆಲವರಿಗೆ ನನ್ನ ಕಂಡರೆ ಇಷ್ಟ ಇಲ್ಲ ಎಂಬ ತೀರ್ಮಾನಕ್ಕೆ ನೀವು ಬರುವದು! 

ಇದೇ ನಿಮ್ಮ ಚಿಂತೆಯ ಮೂಲ. 

ಅದಕ್ಕೆ ಬದಲಾಗಿ ಅವರವರ ಇಷ್ಟ ಎಂಬ ವಿಶಾಲ ಮನಸ್ಸು ನಿಮ್ಮದಾದರೆ? ಚಿಂತೆ ಉಂಟಾಗದು.

ಇನೊಬ್ಬರ ಮೇಲೆ ನಿಮ್ಮ ಅನಿಸಿಕೆ ಹೇರುವ ಬದಲು, ಎಲ್ಲರಿಗೂ ಅವರವರ ಜೀವನ ಇನ್ನೊಬ್ಬರಿಗೆ ತೊಂದರೆ ನೀಡದಂತೆ ಬದುಕಲು ಬಿಟ್ಟರೆ? ಚಿಂತೆ ನಿಮ್ಮ ಸನಿಹ ಕೂಡಾ ಬರದು!

ಭಿನ್ನಾಭಿಪ್ರಾಯ ಅನ್ನುವದು ಸಹಜ ಅನ್ನುವದನ್ನು ಅರಿತಾಗ ನೀವು ಇನ್ನೊಬ್ಬರನ್ನು ನೋಡುವ ರೀತಿ ಬದಲಾಗುತ್ತದೆ. ಇನ್ನೂ ಚೆನ್ನಾಗಿ ವ್ಯಕ್ತಿಗಳನ್ನು ಅರಿಯಬಹುದು. 

ಇದರಿಂದ ನಿಮ್ಮ ಮನೆ ಮಂದಿ, ನೆಂಟರ ನಡುವೆ ಇರುವ ಮನಸ್ತಾಪ ಟುಸ್ ಎಂದು ಮಾಯ ಆಗಿ ಬಿಡುತ್ತದೆ. 

ಈ ಅತ್ತೆ ಸೊಸೆ, ಅಣ್ಣ-ತಮ್ಮ, ಗಂಡ-ಹೆಂಡತಿ ನಡುವೆ ಇರುವ ವಿರಸಕ್ಕೆ ಅವರವರ ದೃಷ್ಟಿ ಕೋನದ ವ್ಯತ್ಯಾಸ ಕಾರಣ.

ಯಾರೇ ಏನೇ ಹೇಳಿದರೂ ಅದನ್ನು ಅವರ ದೃಷ್ಟಿ ಕೋನದಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಹೊರತೂ ಕೇವಲ ನಿಮ್ಮ ಪಾಯಿಂಟ್ ಆಫ್ ವ್ಯೂ ನಿಂದ ಅಲ್ಲ! ಆಗ ಸಮಾಧಾನ ಸಿಕ್ಕೀತು.

ಹಾಗಂತ ಅಯ್ಯೋ ಪಾಪ ಅವರ ದೃಷ್ಟಿಕೋನವೇ ಹಾಗೆ, ಸಮಯ ಸಂದರ್ಭ ಹಾಗೆ ಮಾಡಿದೆ ಕದೀತಾರೆ ಅಂತಾ ಕಳ್ಳರಿಗೆ ಕನಿಕರ ತೋರಿಸ ಬೇಡಿ!!

ನಮ್ಮ ಸಂತೋಷ ಎಂದು ಆರಂಭ?

ವಾಸ್ತವ ಎಂದರೆ ನಿಜ ಜೀವನದಲ್ಲಿ ಆಗಿರುವ ಘಟನೆ. ಅದಕ್ಕೆ ಅರ್ಥ, ಯೋಚನೆ, ವಿವರಣೆ ಒಂದೂ ಇಲ್ಲ. ಅದನ್ನು ಕೊಡುವವರು ನಾವೇ!

ಆ ಮೂಲಕ ಈ ಜೀವನದ ಅನುಭವ ನಮ್ಮೊಳಗೆ ಉಂಟಾಗುತ್ತದೆ. 

ನಮ್ಮ ಭಾವನೆಗಳು ನಿಜ ಜೀವನದಲ್ಲಿ ಆದ  ಘಟನೆಗಳಿಂದ ಬರದು. ಆ ಘಟನೆಯ ಬಗ್ಗೆ ನಾವು ಆಲೋಚನೆ ಮಾಡುವದರಿಂದ ಉಂಟಾಗುತ್ತದೆ. 

ನಮ್ಮೆಲ್ಲ ಮನಸ್ಸಿನ ಒಳಗಿನ ನೋವು, ಒದ್ದಾಟಗಳಿಗೆ ನಮ್ಮದೇ ಆದ ಆಲೋಚನೆಗಳೇ ಮೂಲ ಕಾರಣ. 

ನಾವು ಎಂದು ಆಲೋಚನೆ ಮಾಡುವುದು ನಿಲ್ಲಿಸುತ್ತೇವೆಯೋ ಅಂದು ನಮ್ಮ ಸಂತೋಷಕರ ಕ್ಷಣ ಆರಂಭ!

ಮೊದಲು ಯಾವುದೇ ವಿಷಯದ ಬಗ್ಗೆ ಆಲೋಚನೆ ಮಾಡುವದನ್ನು ನಿಲ್ಲಿಸಿ. ಕನಿಷ್ಟ ಕಡಿಮೆ ಗೊಳಿಸಿ.

ನಾವು ಯಾಕೆ ಆಲೋಚನೆ ಮಾಡುತ್ತೇವೆ?

ಹಿಂದೆ ನಮ್ಮ ಪೂರ್ವಜರು ಕಾಡಲ್ಲಿ ತುಂಬಾ ಅಪಾಯಕರ ಸನ್ನಿವೇಶದಲ್ಲಿ ಇರುತ್ತಿದ್ದರು.ಗೊಂಡಾರಣ್ಯ, ಪರ್ವತಗಳ ಸಾಲು, ಕಾಡು ಪ್ರಾಣಿಗಳು, ಗುಡ್ಡ, ವಿಷದ ಗಿಡಗಳು, ಕೀಟ, ಸರ್ಪ, ರೋಗ ಒಂದೇ ಎರಡೇ.

ಸ್ವಲ್ಪ ಏಮಾರಿದರೂ ಪರಲೋಕಕ್ಕೆ ಹೋಗ ಬೇಕಾಗಿತ್ತು. ಅದಕ್ಕೇ ಆಗ ನಮ್ಮ ಹಿರೀಕರು ಪ್ರತಿಕ್ಷಣ ಎಚ್ಚರದಿಂದ ಸುತ್ತ ಮುತ್ತ ಅಪಾಯದ ಬಗ್ಗೆ ವಿಚಾರ ಮಾಡುತ್ತಾ ಇರುತ್ತಿದ್ದರು. ರಾತ್ರಿ ಮಲಗಿದರೂ ನಡು ರಾತ್ರಿಯಲ್ಲಿ ಸರ್ಪ ಕಚ್ಚುವ, ಕಾಡು ಪ್ರಾಣಿ ದಾಳಿ ಮಾಡುವ ಭಯ ಇದ್ದೇ ಇತ್ತು.

ಅದಕ್ಕೆ ನಮ್ಮ ಮನಸ್ಸು ಈಗಲೂ ಕೂಡಾ ಸುತ್ತ ಇರುವ ಅಪಾಯಗಳನ್ನು ಗಮನಿಸುತ್ತಾ ಇರುತ್ತದೆ. ಅಷ್ಟೇ ಅಲ್ಲದೆ ಹಿಂದಿನ ಅನುಭವಗಳ ಆಧಾರದ ಮೇಲೆ ಕಾಲ್ಪನಿಕ ಸಂದರ್ಭ ಸಿದ್ಧ ಪಡಿಸಿ ಮುಂದೆ ಏನಾಗಬಹುದು ಎಂದು ಊಹಿಸಲು ಆರಂಭಿಸುತ್ತದೆ. 

ಹಿಂದೆ ಕಾಡಲ್ಲಿ ಹಾಗೂ ಗವಿಯಲ್ಲಿ ಇದು ಆತ್ಮ ರಕ್ಷಣೆಗಾಗಿ ಇದು ಸಹಾಯಕ ಆಗಿತ್ತು. ಈಗ ಕಾಂಕ್ರೀಟ್ ಕಾಡಲ್ಲಿ ವಾಸವಾಗಿರುವ ನಮಗೆ ಪ್ರತಿ ಕ್ಷಣ ಆಪತ್ತಿನ ಬಗ್ಗೆ ವಿಚಾರ ಮಾಡುತ್ತಾ ಕೂರುವ ಅಗತ್ಯ ಇಲ್ಲ.

ನಾವು ಆಲೋಚನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಆಗದು ಆದರೆ ಆಲೋಚನೆಯಲ್ಲಿ ಕಳೆಯುವ ಸಮಯವನ್ನು ನಿಧಾನವಾಗಿ ಕಡಿಮೆ ಮಾಡಬಹುದು.

ಚಿಂತನೆ ಮತ್ತು ಚಿಂತೆ

ಚಿಂತನೆ ಮತ್ತು ಚಿಂತೆ ಇವೆರಡು ಆಲೋಚನೆಗಳೇ. ಆದರೆ ಇವುಗಳಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. 

ಚಿಂತನೆ ನಮ್ಮಲ್ಲಿ ಸಕಾರಾತ್ಮಕ(ಪಾಸಿಟಿವ್), ಸೃಜನಾತ್ಮಕ(ಕ್ರಿಯೇಟಿವ್), ಪ್ರೀತಿ ಇತ್ಯಾದಿ ಭಾವನೆಗಳನ್ನು ಹುಟ್ಟುಹಾಕಿ ನಮಗೆ ಸುಸ್ತು ಮಾಡುವುದಿಲ್ಲ. ಬದಲಾಗಿ ಸಮಸ್ಯೆಗಳು ಪರಿಹಾರ ಆಗುತ್ತೆ. ಹೊಸ ಐಡಿಯಾ ಕೂಡಾ ಹುಟ್ಟ ಬಹುದು.

ಆದರೆ ಚಿಂತೆ ಋಣಾತ್ಮಕ(ನೆಗಟಿವ್), ನಾಶಕಾರಿ, ಭಯ ಇತ್ಯಾದಿ ಭಾವನೆಗಳನ್ನು ಉಂಟು ಮಾಡಿ ನಮ್ಮನ್ನು ದಣಿಯುವಂತೆ ಮಾಡುತ್ತದೆ. ಡಿಪ್ರೆಶನ್ ಇತ್ಯಾದಿಗಳು ಮನುಷ್ಯನನ್ನು ಕುಗ್ಗಿಸಿ ಸ್ವಲ್ಪ ಏಮಾರಿದರೆ ಸರ್ವ ನಾಶ ಮಾಡಿ ಬಿಡುತ್ತದೆ.

ಯಾವಾಗಲೂ ನಮ್ಮ ಆಲೋಚನೆಗಳು ಚಿಂತನೆ ಕಡೆ ಇರಬೇಕು ಹೊರತು ಚಿಂತೆಯ ಕಡೆಗಲ್ಲ.

ಪಾಸಿಟಿವ್ ಥಿಂಕಿಂಗ್ ಮಾಡಲು ನಮ್ಮ ಸುತ್ತ ಮುತ್ತ ಧನಾತ್ಮಕ ವಿಚಾರಗಳನ್ನು ನಮಗೆ ತುಂಬುವ ನೆಂಟರು, ಸ್ನೇಹಿತರು, ಪುಸ್ತಕಗಳು, ಸಿನಿಮಾ, ಧಾರಾವಾಹಿ ಬೇಕು. 

ಆಲೋಚನೆಗಳು ಪಾಸಿಟಿವ್ ಆಗಿರಲಿ

ನಾವು ಯಾವುದರ ಬಗ್ಗೆ ವಿಚಾರ ಮಾಡುತ್ತೀವೋ ಅದು ನಮಗೆ ನೋವನ್ನುಂಟು ಮಾಡುವುದಿಲ್ಲ. ಅದಕ್ಕೆ ಬದಲಾಗಿ ನಾವು ಆಲೋಚನೆ ಮಾಡುವುದೇ ನಮಗೆ ನೋವನ್ನುಂಟು ಮಾಡುತ್ತದೆ. 

ಆದ್ದರಿಂದ ಆಲೋಚನೆ ಮಾಡಿಬೇಡಿ ಮಾಡಿದರೂ ಉತ್ತಮ ವಿಚಾರಗಳ ಆಲೋಚನೆಗಳನ್ನ ಮಾಡುತ್ತಾ ಇರಿ.

ಸಮಸ್ಯೆಗಳಿದ್ದರೆ ಅದಕ್ಕೆ ಪರಿಹಾರ ಏನು ಎಂದು ಯೋಚಿಸಿ ಬಗೆಹರಿಸಲು ಕಾರ್ಯಗತ ಗೊಳಿಸಿ. ಬರಿ ವಿಚಾರ ಮಾಡುತ್ತಾ ಕುಳಿತರೆ ಪ್ರಯೋಜನ ಇಲ್ಲ.

ಜೀವನದ ಗುರಿಗಳು

ನಮ್ಮ ಜೀವನದಲ್ಲಿ ಎರಡು ರೀತಿಯ ಗುರಿಗಳಿವೆ ಒಂದು ಸ್ಪೂರ್ತಿಯಿಂದ ಮಾಡಿದ ಗುರಿ. ಇನ್ನೊಂದು ಅನಿವಾರ್ಯ ಕಾರಣಗಳಿಂದ ಇರುವ ಗುರಿಗಳು. 

ನಾವು ಏನನ್ನಾದರೂ ಯಾವುದೇ ಕಂಡೀಶನ್ ಅಥವಾ ಕಾರಣವಿಲ್ಲದೆ ತಯಾರಿಸಿದರೆ ಆಗ ತಕ್ಷಣ ಎಲ್ಲಾ ರೀತಿಯ ಪಾಸಿಟಿವ್ ಧನಾತ್ಮಕ ಭಾವನೆ ಉಂಟಾಗುತ್ತದೆ. 

ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ಜೀವನದಲ್ಲಿ ಸ್ಪೂರ್ತಿಯಿಂದ ತಯಾರಿಸಿದ ಗುರಿಗಳ ಕಡೆಗೆ, ಚಿಂತನೆಯ ಕಡೆಗೆ ಹೋಗಲು ಪ್ರಯತ್ನಿಸಿ. 

ಆಗ ಚಿಂತೆ ದೂರವಾಗಿ ಖುಷಿ, ಸಂತೋಷ, ಸಮೃದ್ಧಿ ಎಲ್ಲ ತನ್ನಿಂದ ತಾನೇ ನಿಮ್ಮನ್ನ ಆವರಿಸಿಕೊಳ್ಳುತ್ತದೆ.

ತರ್ಕ ಬದ್ಧವಲ್ಲದ ಡೆಡ್ ಲೈನ್, ಮೈಕ್ರೋ ಮ್ಯಾನೆಜ್ ಮೆಂಟ್ ಇತ್ಯಾದಿ ಬರಿ ಸ್ಟ್ರೆಸ್ / ಮಾನಸಿಕ ಒತ್ತಡ ನೀಡುತ್ತೇ ಹೊರತು ಏನೂ ಕೆಲಸ ಆಗದು.

ಅನಿವಾರ್ಯ ಕಾರಣಕ್ಕಾಗಿ ಇರುವ ಗುರಿ ಬರೀ ನೋವಿನ ಭಾವನೆ ಮೂಡಿಸುತ್ತದೆ.

ನಿಮ್ಮ ಜೀವನದ ಗುರಿ ವಾಸ್ತವಕ್ಕೆ ಹತ್ತಿರ ಇರಲಿ. ಸಾಧ್ಯವೇ ಆಗದ ಗುರಿ ಇಟ್ಟುಕೊಂಡು ಆಗಲಿಲ್ಲ ಎಂದು ಕೊರಗುವದರಲ್ಲಿ, ತೀರಾ ಮಾನಸಿಕ ಒತ್ತಡ ಅನುಭವಿಸುವದರಲ್ಲಿ  ಸುಖ ಇಲ್ಲ.

ನಿಷ್ಕಾಮ ಪ್ರೀತಿ ಹಾಗೂ ನಿಷ್ಕಾಮ ಕೆಲಸ

ಯಾವುದೇ ರೀತಿ ಅಪೇಕ್ಷೆ ಇಲ್ಲದೆ ಮಾಡುವ ಪ್ರೀತಿ ಹಾಗೂ ಕೆಲಸ, ಮಿತಿ ಇಲ್ಲದ ಸಂತೋಷವನ್ನು ಕೊಡುತ್ತದೆ. 

ಪ್ರೀತಿಯಲ್ಲಿ ವಾಪಸ್ ತನಗೆ ಏನೋ ದೊರೆಯಬೇಕೆಂಬ ಅಪೇಕ್ಷೆ ಇಲ್ಲದಿರಲಿ. 

ಹಾಗೆಯೇ ಕೆಲಸದಲ್ಲಿ ಕೂಡ ಯಾವುದೇ ರೀತಿಯ ಪ್ರಮೋಷನ್, ಚೀಲದ ತುಂಬಾ ಹಣ ಮೊದಲಾದ ಅಪೇಕ್ಷೆ ಇಟ್ಟುಕೊಳ್ಳಬೇಡಿ. ಇರುವದರಲ್ಲಿ ಖುಷಿ ಪಡಿ. ಮನಸ್ಸು ಕೊಟ್ಟು ಕೆಲಸ ಮಾಡಿ ಮುಂದಿನ ಹಂತಕ್ಕೆ ಹೋಗಲು ಏನು ಬೇಕೋ ಅದೆಲ್ಲವ ಮಾಡಿ. ಎಲ್ಲಾ ತನ್ನಿಂದ ತಾನೇ ಬರುತ್ತದೆ.

ನೀವು ಮಾಡಿದ ಯಾವುದೇ ಸಹಾಯ, ಕೆಲಸಕ್ಕೆ ಪ್ರತಿ ಫಲದ ಅಪೇಕ್ಷೆ ಇಟ್ಟು ಕೊಳ್ಳ ಬೇಡಿ.

ಆಗ ಯಾವುದೇ ರೀತಿಯ ದುಃಖ ಉಂಟಾಗದು.

ಯಾವುದು ಕೂಡ ಒಳ್ಳೆಯದಲ್ಲ ಕೆಟ್ಟದ್ದಲ್ಲ

ಈ ಪ್ರಪಂಚದಲ್ಲಿ ಯಾವುದು ಒಳ್ಳೆಯದು ಅಥವಾ ಕೆಟ್ಟದ್ದಲ್ಲ. ನಮ್ಮ ಆಲೋಚನೆ ಹಾಗೆ ಭಾವಿಸುವಂತೆ ಮಾಡುತ್ತದೆ.

ಉದಾಹರಣೆಗೆ, ಒಂದು ಪಿಯಾನದಲ್ಲಿ 88 ಕೀಲಿ ಇದ್ದರೆ ಯಾವ ಕೀಲಿ ಕೂಡ ತಪ್ಪು ಕೀಲಿಯಲ್ಲ. ಆದರೆ ಅವುಗಳನ್ನು ಒಂದರ ನಂತರ ಇನ್ನೊಂದನ್ನು ನುಡಿಸಿದಾಗ ನಮಗೆ ಕೆಲವೊಮ್ಮೆ ಹೆಚ್ಚು ಅಥವಾ ಕಡಿಮೆ ಖುಷಿಯಾಗುತ್ತದೆ. 

ಇದೇ ರೀತಿ ರಾಜಕೀಯ ಪಕ್ಷಗಳು ಕೂಡ. ಆ ಪಕ್ಷ ಸರಿ ಈ ಪಕ್ಷ ತಪ್ಪು ಎಂದು ಭಾವಿಸಿದಾಗ ನಮ್ಮ ನಮ್ಮಲ್ಲಿಯೇ ಋಣಾತ್ಮಕ ಭಾವನೆ ಉಂಟಾಗುತ್ತದೆ.

ಅದೇ ರೀತಿ ಸಿದ್ದಾಂತಗಳು ಕೂಡ. ಒಂದು ಸಿದ್ದಾಂತ ಒಳ್ಳೆಯದು ಅನ್ನಿಸಿದರೆ ಇನ್ನೊಂದು ಕೆಟ್ಟದ್ದು ಅನ್ನಿಸಬಹುದು. ವಾಸ್ತವದಲ್ಲಿ ಯಾವುದು ಕೂಡ ಒಳ್ಳೆಯದಲ್ಲ ಅಥವಾ ಕೆಟ್ಟದ್ದಲ್ಲ.

ತಟಸ್ಥ ಅಂದರೆ ನ್ಯೂಟ್ರಲ್ ಮನಸ್ಸಿನಿಂದ ನೋಡಿದರೆ ನಮಗೆ ವಾಸ್ತವ ಅರಿವು ಮೂಡುತ್ತದೆ. ಮನಸ್ಸಿನ ಕಿರಿ ಕಿರಿ, ಉದ್ವೇಗ ಕಡಿಮೆ ಆಗುತ್ತದೆ.

ನಮ್ಮ ಆಲೋಚನೆಗಳೇ ನೆಗೆಟಿವ್ ಭಾವನೆಗೆ ಕಾರಣ

ಈ ಋಣಾತ್ಮಕ ಭಾವನೆಗಳು ತಪ್ಪು ತಿಳುವಳಿಕೆಯ ಸೂಚನೆ ಕೂಡ. ನಾವು ಯಾವಾಗ ನೆಗೆಟಿವ್ ಭಾವನೆಗಳ ಹಿಡಿತಕ್ಕೆ ಒಳಪಡುತ್ತೀವಿಯೋ ಆಗ ನಾವು ನಮ್ಮ ಆಲೋಚನೆಗಳನ್ನ ನಂಬುತ್ತೇವೆ. 

ಆ ಸಮಯದಲ್ಲಿ ನಮಗೆ ಆ ಅನುಭವ ಎಲ್ಲಿಂದ ಬಂತು ಹಾಗೂ ನಮ್ಮ ಆಲೋಚನೆಗಳೇ ನಮ್ಮ ಋಣಾತ್ಮಕ ಭಾವನೆಗಳಿಗೆ ಕಾರಣ ಎಂಬುದನ್ನು ಮರೆತುಬಿಡುತ್ತೇವೆ.

ಕಡಿಮೆ ಅನಾವಶ್ಯಕ ಆಲೋಚನೆಗಳು

ನಾವು ಅನಾವಶ್ಯಕ ಆಲೋಚನೆಗಳನ್ನು ಕಡಿಮೆ ಮಾಡಿದಾಗ ಉತ್ತಮ ಚಿಂತನೆಗೆ ಮನಸ್ಸಿನಲ್ಲಿ ಜಾಗ ದೊರೆಯುತ್ತದೆ. 

ಒಂದು ಪಾತ್ರೆಯಲ್ಲಿ ಈಗಾಗಲೇ ನೀರು ತುಂಬಿದ್ದರೆ ಇನ್ನೇನನ್ನು ತುಂಬಲು ಜಾಗ ಇರದು. ಅದು ಹೊರಗೆ ಹರಿದು ವ್ಯರ್ಥ ಆಗುತ್ತದೆ. 

ಮನಸ್ಸು ಕೂಡ ಹಾಗೆಯೇ. ಮನಸ್ಸಿನಲ್ಲಿ ಅನಾವಶ್ಯಕ ವಿಚಾರಗಳನ್ನ ತುಂಬಿದ್ದರೆ ಉತ್ತಮ ವಿಷಯಕ್ಕೆ ಜಾಗ ಇರದು.

ಎಲ್ಲಾ ಆಲೋಚನೆ ವಾಸ್ತವ ಅಲ್ಲ

ನಮ್ಮ ಮನಸ್ಸಿನಲ್ಲಿರುವ ವಿಚಾರಗಳೆಲ್ಲ ವಾಸ್ತವ ಅಲ್ಲ. ನಮ್ಮ ಸುತ್ತ ಮುತ್ತಲಿನ ಪರಿಸರವೇ ವಾಸ್ತವ. ಕಾಲ್ಪನಿಕ ಜಗತ್ತಿನಿಂದ ಹೊರ ಬನ್ನಿ.

ಟಿವಿ ಸಿನೆಮಾ ಸಾಮಾಜಿಕ ತಾಣ ಇತ್ಯಾದಿಗಳಲ್ಲಿ ಮನಸ್ಸಿಗೆ ಧನಾತ್ಮಕ ಭಾವನೆ ಮಾಡಿಸುವ ಕಂಟೆಂಟ್ ಜಾಸ್ತಿ ನೋಡಿ. ನೆಗೆಟಿವ್ ಭಾವನೆ ಮೂಡಿಸುವ ಹಿಂಸೆ, ಹೊಡೆದಾಟ, ಜಗಳ, ಕೂಗಾಟ, ತೆಗಳುವ ಕಂಟೆಂಟ್ ಮಾಹಿತಿ ದೂರಕ್ಕೆ ದೂಡಿ.

ನಿಮ್ಮಲ್ಲಿ ಕೀಳರಿಮೆ ಮೂಡಿಸಿ, ಇನ್ನೊಬ್ಬರ ಮೇಲೆ ದ್ವೇಷ ಭಾವನೆ ಮೂಡಿಸುವ ಪುಸ್ತಕ, ಸಿನಿಮಾ, ಟಿವಿ ಕಾರ್ಯಕ್ರಮಗಳನ್ನು ಓದಬೇಡಿ, ವೀಕ್ಷಣೆ ಮಾಡಬೇಡಿ. ನೆಗೆಟಿವ್ ಸೈಕಾಲಜಿ ಬಳಸಿ ನಿಮ್ಮ ಮನಸ್ಸನ್ನು ಆವರಿಸಲು ಪ್ರಯತ್ನ ಮಾಡುತ್ತಾರೆ. ಅನವಶ್ಯಕ ವಿಷಯಗಳ ಬಗ್ಗೆ ನಿಮಗೆ ಸಿಟ್ಟು / ದುಃಖ ಬಂದು ಕಿರಿಕಿರಿ ಮತ್ತೇನೂ ಪ್ರಯೋಜನ ಇಲ್ಲ. ನಿಮ್ಮ ಸುತ್ತಲಿನ ವಾಸ್ತವ ಹಾಗೇ ಇರುತ್ತದೆ.

ಯೋಗ ಧ್ಯಾನ ಮಾಡಿ ರಿಲ್ಯಾಕ್ಸ್ ಆಗಿರಿ. ಸಕಾರಾತ್ಮಕ ಭಾವನೆ ನಿಮ್ಮನ್ನು ಆವರಿಸಿರಲಿ.

ನಮ್ಮ ಅಂತಃ ಪ್ರಜ್ಞೆಯನ್ನು ಅನುಸರಿಸುವುದು ಹೇಗೆ

ಕಾರನ್ನು ಅಥವಾ ಸ್ಕೂಟರ್ ಅನ್ನು ಹೊಸತಾಗಿ ಕಲಿಯುವಾಗ ನಾವು ಪ್ರತಿಯೊಂದು ವಿಷಯಕ್ಕೂ ಹೆದರುತ್ತಾ ಗಿಯರ್, ಕ್ಲಚ್, ಇಂಡಿಕೇಟರ್ ಅನ್ನು ಬದಲಿಸುತ್ತಾ ಎಕ್ಸಲರೇಟರ್ ಒತ್ತುತ್ತೇವೆ. ಅಲ್ಲಿ ಭಯ ತುಂಬಿರುತ್ತದೆ.

ಕಾಲ ಕ್ರಮೇಣ ರೂಡಿ ಆಗಿ ನಾವು ಅಂತಃ ಪ್ರಜ್ಞೆ ಬಳಸಲು ಆರಂಭಿಸುತ್ತೇವೆ. ಆಗ ಅಕ್ಕ ಪಕ್ಕದವರೊಡನೆ ಮಾತನಾಡುತ್ತಾ, ರೇಡಿಯೋ ಕೇಳುತ್ತಾ ಕಿಂಚಿತ್ ಭಯ ಇಲ್ಲದೇ ಕಾರ್ / ಸ್ಕೂಟರ್ ಚಲಾಯಿಸಲು ಸಾಧ್ಯ ಅಲ್ವಾ? 

ಹೇಗೆ ಚಲಾಯಿಸ ಬೇಕು ಅನ್ನುವ ಯಾವುದೇ ಆಲೋಚನೆ ಮಾಡಬೇಕಿಲ್ಲ! ಭಯ ನಮ್ಮ ಹತ್ತಿರ ಕೂಡಾ ಸುಳಿಯದು! ಅದುವೇ ಅಂತಃ ಪ್ರಜ್ಞೆಯ ಶಕ್ತಿ!!

ನಾವು ಆಲೋಚನೆಯ ಮಾಡದಿರುವ ಅಂತಹ ಸ್ಥಿತಿಯಲ್ಲಿ ಯಾವುದೇ ಕ್ಷಣದಲ್ಲಿ ಇರಬಹುದು. 

ನಾವು ಆಲೋಚನೆ ಮಾಡುತ್ತಿರುವಾಗ ಸಾಮಾನ್ಯವಾಗಿ ಹಿಂದೆ ಯಾವಾಗಲೂ ನಡೆದ ಘಟನೆ ಅಥವಾ ಮುಂದಿನ ಕಾಲದ ಬಗ್ಗೆ ಮಾಡುತ್ತಿರುತ್ತೇವೆ. 

ಆದರೆ ವಾಸ್ತವವನ್ನ ಈಗಿನ ಕ್ಷಣದಲ್ಲಿ ಮಾತ್ರ ನೋಡಬಹುದು. 

ಆದ್ದರಿಂದ ನಮ್ಮ ಅಂತ: ಪ್ರಜ್ಞೆಯನ್ನ ಬಳಸಿ ಈಗಿನ ಕ್ಷಣದ ಮೇಲೆ ಗಮನವಿಟ್ಟು ಕೆಲಸ ಮಾಡುವುದರಿಂದ ನಾವು ಅನವಶ್ಯಕ ಆಲೋಚನೆ ಮಾಡುವುದನ್ನ ನಿಲ್ಲಿಸಬಹುದು. 

ಆದರೆ ಇದಕ್ಕೆ ಒಂದು ತಡೆಗೋಡೆ ಇದೆ. ಅದುವೇ ಭಯ! 

ಅದನ್ನು ಹತ್ತಿಕ್ಕಿದ್ದರೆ ನಾವು ಸುಲಭವಾಗಿ ನಮ್ಮ ಅಂತಃ ಪ್ರಜ್ಞೆಯನ್ನು ನಂಬಿ ಕಾರ್ಯ ನಿರ್ವಹಿಸಬಹುದು.

ಉದಾಹರಣೆಗೆ ಕಾರನ್ನು ಓಡಿಸಿಕೊಂಡು ಹೋಗುವಾಗ ಹಿಂದೆ ನಡೆದ ಅಪಘಾತ ಅಥವಾ ಮುಂದೆ ಆದರೆ ಎಂದು ಭಾವಿಸಿ ಹೆದರುತ್ತಾ ಓಡಿಸುವುದು ಒಳ್ಳೆಯದಲ್ಲ. ಈಗಿನ ಸನ್ನಿವೇಶ ನೋಡಿ ನಿರ್ಧಾರ ತೆಗೆದುಕೊಂಡು ಕಾಳಜಿ ಪೂರ್ಣವಾಗಿ ಗಾಡಿ ಓಡಿಸುವದು ಜಾಣತನ.



ಈ ಲೇಖನದಲ್ಲಿ ಬರುವ ಎಲ್ಲ ಚಿತ್ರ ಎಐ ಬಳಸಿ ರಚಿಸಲಾಗಿದೆ. ಇವು ಈ ಪುಸ್ತಕದ ಭಾಗ ಅಲ್ಲ. ಹಾಗೂ ಭಾವಾರ್ಥಕ್ಕೆ ಅನುಗುಣವಾಗಿ ನನ್ನದೇ ಉದಾ, ಸನ್ನಿವೇಶ ರಚಿಸಿದ್ದೇನೆ.

ಕೊನೆ ಮಾತು

ಕೆಲವು ಪುಸ್ತಕಗಳು ಓದಿದ ಮರುಕ್ಷಣ ಮರೆತು ಹೋಗಿರುತ್ತದೆ. ಇನ್ನು ಕೆಲವು ಭಾವನಾತ್ಮಕ ಆಗಿ ಕಾಡುತ್ತವೆ. ಆದರೆ ಈ ಪುಸ್ತಕ ಸರಿಯಾಗಿ ಓದಿ ಅರ್ಥ ಮಾಡಿ ಕೊಂಡವರಲ್ಲಿ ತಮ್ಮದೇ ಆಲೋಚನೆಯ ಬಗ್ಗೆ ಅರಿವು ಉಂಟು ಮಾಡುತ್ತೆ ಎಂದರೆ ಉತ್ಪ್ರೇಕ್ಷೆ ಅಲ್ಲ.

ಈ ಪುಸ್ತಕವನ್ನು ನಿಧಾನವಾಗಿ ಓದಿ ಆಗ ಮನಸ್ಸಿನಲ್ಲಿಳಿಯುತ್ತದೆ.

ಈ ಮೇಲಿನ ಸಾರಾಂಶ ಇಷ್ಟ ಆದರೆ ಈ ಪುಸ್ತಕ ಇಲ್ಲಿ ಪಡೆಯಬಹುದು. ಈ ಲೇಖನ ಹೇಗನ್ನಿಸಿತು ನಮಗ ತಿಳಿಸುವದನ್ನು ಮರಿಬೇಡ್ರಿ!

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

blogger

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ